ತುಪ್ಪಳದ ಸೀಲ್ -
 	ಪಿನಿಪೀಡಿಯ ಗುಣದ ಓಟರೈಯಿಡೀ ಕುಟುಂಬಕ್ಕೆ ಸೇರಿದ ಒಂದು ಸಾಗರವಾಸಿ ಸಸ್ತನಿ (ಫರ್ ಸೀಲ್, ನಾರ್ದರ್ನ್ ಫರ್ ಸೀಲ್). ಇದರ ವೈಜ್ಞಾನಿಕ ಹೆಸರು ಕ್ಯಾಲೊರೈನಸ್ ಅರ್ಸಿನಸ್. ಬೇರಿಂಗ್ ಸಮುದ್ರದ ಪ್ರಿಬಿಲಾಫ್ ದ್ವೀಪಗಳು. ಅಲ್ಯೂಷನ್ ದ್ವೀಪಗಳ ಪಶ್ಚಿಮ ತುದಿಯಾಚೆ ಇರುವ ಕಮ್ಯಾಂಡರ್ ದ್ವೀಪಗಳು, ರಷ್ಯದ ಓಕಾಟ್‍ಸ್ಕ್ ಸಮುದ್ರದ ರಾಬೆನ್ ದ್ವೀಪ ಹಾಗೂ ಪೆಸಿಫಿಕ್ ಸಾಗರದಲ್ಲಿನ ಕ್ಯೂರೀಲ್ ದ್ವೀಪಗಳಲ್ಲಿ ತುಪ್ಪಳದ ಸೀಲನ್ನು ಬೇಸಿಗೆಯಲ್ಲಿ ಕಾಣಬಹುದು. ಚಳಿಗಾಲದಲ್ಲಿ ಬೇರಿಂಗ್ ಸಮುದ್ರ, ಓಕಾಟ್‍ಸ್ಕ್ ಸಮುದ್ರ, ಉತ್ತರ ಪೆಸಿಫಿಕ್ ಸಾಗರ, ಜಪಾನ್ ಸಮುದ್ರಗಳ ದಕ್ಷಿಣ ಸೀಮೆಗಳಲ್ಲೂ, ಸ್ಯಾನ್‍ಡೀಯೇಗೋ, ಕ್ಯಾಲಿಪೋರ್ನಿಯ ಮತ್ತು ಜಪಾನ್‍ಗಳಲ್ಲೂ ಇದು ಕಾಣದೊರೆಯುತ್ತದೆ. ಈ ಪ್ರದೇಶಗಳಲ್ಲಿ ಸುಮಾರು 17,00,000 ತುಪ್ಪಳದ ಸೀಲ್‍ಗಳಿವೆಯೆಂದು ಅಂದಾಜು ಮಾಡಲಾಗಿದೆ.

	ಸಾಗರವಾಸಿಯಾಗಿರುವ ತುಪ್ಪಳದ ಸೀಲ್ ಜಲಜೀವನಕ್ಕೆ ತುಂಬ ಸೊಗಸಾಗಿ ಹೊಂದಿಕೊಂಡಿದೆ. ನೀರಿನಲ್ಲಿ ಈಜಲು ಅನುಕೂಲವಾಗುವಂತೆ ಇದರ ಬಲ ಹಾಗೂ ಹಿಂಗಾಲುಗಳು ಒಂದುಗೂಡಿವೆ. ಇದು ಭೂರಿಗಾತ್ರದ ಪ್ರಾಣಿಯೂ ಹೌದು. ವಯಸ್ಕ ಗಂಡುಗಳು 1.9-2.1 ಮೀ. ಉದ್ದವೂ 180-300 ಞg. ತೂಕದವೂ ಅಗಿವೆ. ಹೆಣ್ಣುಗಳು ಗಾತ್ರದಲ್ಲಿ ಸಣ್ಣವು ; ಇವುಗಳ ಉದ್ದ 1.5-1.7 ಮೀ. ತೂಕ 36-68 ಞg. ಗಂಡಿನ ದೇಹದ ಬಣ್ಣ ದಟ್ಟಬುದಿ ಇಲ್ಲವೆ ಕಂದು, ಉದರಭಾಗ ಮಾತ್ರ ಕೆಂಗಂದು. ಹೆಣ್ಣು ಬೂದಿಮಿಶ್ರಿತ ಕಂದು ಬಣ್ಣದ್ದು. ಮರಿಗಳು ಹುಟ್ಟುವಾಗ ಸುಮಾರು 5 ಞg. ತೂಕವಾಗಿದ್ದು ಅಚ್ಚ ಕಪ್ಪು ಬಣ್ಣಕ್ಕಿರುವುವು.

	ತುಪ್ಪಳದ ಸೀಲುಗಳು ತಮ್ಮ ಜೀವನದ ಬಹುಪಾಲನ್ನು ಒಂಟೊಂಟಿಯಾಗಿಯೊ ಸಣ್ಣ ಗುಂಪುಗಳಲ್ಲೊ ಇದ್ದುಕೊಂಡು ನೀರಿನಲ್ಲಿಯೇ ಕಳೆಯುತ್ತವೆ. ಚುರುಕಾಗಿ ಈಜಬಲ್ಲ ಇವು ಕೆಲವೊಮ್ಮೆ 110 m. ಆಳಕ್ಕೂ ಮುಳುಗಬಲ್ಲವು. ನೆಲದ ಮೇಲೆ ಮಾತ್ರ ಬಹಳ ಕಷ್ಟಪಟ್ಟು ಅಗಿಂದಾಗ್ಗೆ ವಿಶ್ರಮಿಸುತ್ತ ಓಡಾಡಬಲ್ಲವು ಅಷ್ಟೆ ಇವು ಆಗಾಗ್ಗೆ ಗರ್ಜಿಸುವಂತೆ, ಕೆಮ್ಮುವಂತೆ, ಬಗುಳುವಂತೆ, ಸದ್ದುಗೈಯುವುವು. ಸುಮಾರು 30 ತೆರನ ಕಡಲ ಜೀವಿಗಳನ್ನು -ಮುಖ್ಯವಾಗಿ ಸ್ಕ್ವಿಡ್ಡುಗಳು, ಮೀನು ಕಠಿಣಚರ್ಮಿಗಳು- ತಿಂದು ಜೀವಿಸುತ್ತವೆ. ಸಂತಾನ ವೃದ್ಧಿಯ ಕಾಲದಲ್ಲಿ ಗಂಡುಗಳು ಮಾತ್ರ ಏನನ್ನೂ ತಿನ್ನದೆ ಇರುವುವು. ದೇಹದಲ್ಲಿ ಸಂಗ್ರಹಗೊಂಡ ಕೊಬ್ಬೇ ಇವುಗಳಿಗೆ ಬೇಕಾಗುವ ಶಕ್ತಿಯನ್ನು ಒದಗಿಸುತ್ತದೆ. ಸಂತಾನವೃದ್ಧಿಯ ಶ್ರಾಯದ ಕೊನೆಯಲ್ಲಿ ಗಂಡುಗಳು ಎಷ್ಟು ಬಲಗುಂದುತ್ತವೆ ಎಂದರೆ ಅವಕ್ಕೆ ನೀರಿಗಿಳಿಯಲು ಕೂಡ ಶಕ್ತಿಯಿರುವುದಿಲ್ಲ.

   ಸಂತಾನೋತ್ಪತ್ತಿಯ ಶ್ರಾಯದ ಪ್ರಥಮದಲ್ಲಿ ಗಂಡುಗಳು ಆಯ್ದ ನೆಲೆಗಳಿಗೆ ಬಂದು ಸೇರುವುವು. ಕೊಂಚ ಸಮಯದ ತರುವಾಯ ಹೆಣ್ಣುಗಳು ಅಲ್ಲಿಗೆ ಅಗಮಿಸುತ್ತವೆ. ಆಗ ಒಂದೊಂದು ಗಂಡೂ ಹಲವಾರು ಹೆಣ್ಣುಗಳನ್ನು ಕೂಡಿಸಿಕೊಂಡು ತನ್ನದೇ ಆದ `ಜನಾನಾಗಳನ್ನು (ಹೇರೆಮ್) ರಚಿಸಿಕೊಳ್ಳುತ್ತದೆ. ಇಂಥ ಜನಾನಾಗಳಲ್ಲಿನ ಹೆಣ್ಣುಗಳ ಸಂಖ್ಯೆ ಗುಂಪಿನ ನಾಯಕನಾದ ಗಂಡುಸೀಲಿನ ವಯಸ್ಸನ್ನು ಅವಲಂಬಿಸಿ ಹೆಚ್ಚುಕಡಿಮೆಯಾಗುತ್ತದೆ. ಸುಮಾರು 7 ವರ್ಷ ವಯಸ್ಸಿನ ಗಂಡು 20 ಹೆಣ್ಣುಗಳನ್ನು ಗೆದ್ದುಕೊಂಡರೆ 14 ವರ್ಷ ವಯಸ್ಸಿನ ಗಂಡು 40 ಹೆಣ್ಣುಗಳನ್ನು ಸೇರಿಸಿಕೊಳ್ಳುವುದುಂಟು. ಹೆಣ್ಣುಗಳು ಒಂದು ಸಲಕ್ಕೆ ತಲಾ ಒಂದೊಂದು ಮರಿಯಂತೆ ಹೆರುವುವು. ಗರ್ಭಧಾರಣೆಯ ಅವಧಿ ಸುಮಾರು ಒಂದು ವರ್ಷ. ಮರಿಗಳ ಪಾಲನೆ ಹೆಣ್ಣುಗಳಿಗೇ ಸೇರಿದ್ದು. ತಾಯಿಸೀಲ್ ವಾರಕ್ಕೆ ಹಲವಾರು ಸಲ ಸಮುದ್ರದಲ್ಲಿ ಈಜಿಕೊಂಡು ಕೆಲಮೊಮ್ಮೆ 80-160 ಞm. ದೂರದ ವರೆಗೂ ಹೋಗಿ ಆಹಾರವನ್ನು ಸೇವಿಸಿ ಮರಳಿ ಬಂದು ಸಾವಿರಾರು ಮರಿಗಳ ನಡುವೆ ಇರುವ ತನ್ನ ಮರಿಯನ್ನು ಗುರುತಿಸಿ ಹಾಲುಣ್ಣಿಸುತ್ತದೆ. ಮರಿಗಳು 6-8 ವಾರ ವಯಸ್ಸಿನವಾದ ಬಳಿಕ ಈಜುವ ಸಾಮಥ್ರ್ಯವನ್ನು ಗಳಿಸುತ್ತದೆ. 4 ತಿಂಗಳ ಅನಂತರ ಹಾಲು ಕುಡಿಯುವುದನ್ನು ನಿಲ್ಲಿಸುವುವು. ತರುವಾಯ ಹೆಣ್ಣುಗಳು ಅಹಾರಾನ್ವೇಷನೆಗೆಂದು ದಕ್ಷಿಣಾಭಿಮುಖವಾಗಿ ವಲಸೆ ಹೋಗುವುವು. ಮರಿಗಳು ಕೂಡ ಇದೇ ಕಾಲದಲ್ಲಿ ತಮ್ಮ ಜನ್ಮನೆಲೆಗಳನ್ನು ಬಿಡುವುವಾದರೂ ತಾಯಿ ಸೀಲುಗಳೊಂದಿಗೆ ಹೋಗದೆ ಬೇರೆಯಾಗುವುವು. ಗಂಡುಗಳು ಸಹ ಬೇರೆಯಾಗಿಬೀಡುತ್ತವೆ. ಹೀಗೆ ಮೂರು ಗುಂಪುಗಳು ಏರ್ಪಡುವುವು. ಸುಮಾರು ಒಂದು ವರ್ಷಕಾಲ ಹೀಗೆ ತಿರುಗಾಡುತ್ತಿದ್ದು ಮತ್ತೆ ಸಂತಾನಾಭಿವೃದ್ದಿಯ ಕಾಲಕ್ಕೆ ಗಂಡುಗಳೂ ಹೆಣ್ಣುಗಳೂ ತಮ್ಮತಮ್ಮ ನಿರ್ದಿಷ್ಟ ನೆಲೆಗಳಿಗೆ ಹಿಂತಿರುಗುವುವು. ಈ ಒಂದು ವರ್ಷದ ಅವಧಿಯಲ್ಲಿ ಇವು ಸುಮಾರು 10,000 ಞm. ದೂರವನ್ನು ಕ್ರಮಿಸುವುವು ಎಂದು ಹೇಳಲಾಗಿದೆ.

	ತುಪ್ಪಳದ ಸೀಲುಗಳಿಗೆ ತುಂಬ ನಯವಾದ, ಸುಂದರವಾದ ಚರ್ಮವಿರುವುದರಿಂದ ಇದಕ್ಕಾಗಿ ಇವನ್ನು ಬೇಟೆಯಾಡಲಾಗುತ್ತದೆ. ಹಿಂದೆ ಈ ಬೇಟೆಯಿಂದಾಗಿ ಇವುಗಳ ಸಂಖ್ಯೆ 1,32,000 ಕ್ಕೆ ಇಳಿದಿತ್ತು (1910). ಇವುಗಳ ವಂಶವೇ ನಿರ್ಮೂಲವಾಗುವ ಸಂಭವವನ್ನು ಅರಿತು ಅಮೆರಿಕ ಸಂಯುಕ್ತ ಸಂಸ್ಥಾನ ರಷ್ಯ, ಗ್ರೇಟ್ ಬ್ರಿಟನ್, ಮತ್ತು ಜಪಾನುಗಳು 1911 ರಲ್ಲಿ ಒಮ್ಮೆ, 1957ರಲ್ಲಿ ಮತ್ತೊಮ್ಮೆ ಒಪ್ಪಂದ ಮಾಡಿಕೊಂಡು ತುಪ್ಪಳದ ಸೀಲುಗಳ ಬೇಟೆಯನ್ನು ನಿಯಂತ್ರಿಸಿದವು. ಇದರಿಂದಾಗಿ ಇವುಗಳ ಸಂಖ್ಯೆ ನಿಧಾನವಾಗಿ ಏರುತ್ತಬಂದಿದೆ.
							(ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ